×

HCG in News

ಬೆಂಗಳೂರಲ್ಲೇ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ: ಹೇಗಿರುತ್ತೆ ಚಿಕಿತ್ಸೆ?

ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದೇ ಒಂದು ದೊಡ್ಡ ಸವಾಲಾಗಿ ಬಿಟ್ಟಿದೆ. ಮಹಾಮಾರಿ ಅಂಟಿಕೊಂಡರೆ ಸಾವು ನಿಶ್ಚಿತವೇ ಎಂಬ ಭೀತಿ ಜನರ ಎದೆ ಹೊಕ್ಕಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಏರುತ್ತಿದ್ದು, ಇದರ ನಡುವೆ ಸರ್ಕಾರ ನೀಡಿದ ಸಂದೇಶ ಕೊಂಚ ನೆಮ್ಮದಿ ತಂದಿದೆ.

ಬೆಂಗಳೂರಿನಲ್ಲೇ ಇರುವ ಎಚ್.ಸಿ.ಜಿ ಬೆಂಗಳೂರು ಇನ್ಸ್ ಟಿಟ್ಯೂಟ್ ಆಫ್ ಅಂಕೋಲಜಿ ಸ್ಪೆಷಲ್ ಸೆಂಟರ್ ನಲ್ಲಿ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ನಡೆಸುವುದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರದಿಂದ ಅನುಮತಿ ದೊರೆತಿದೆ.

ವಿಶ್ವಕ್ಕೆ ಕೊರೊನಾ ವೈರಸ್ ಪರಿಚಯಿಸಿದ ಚೀನಾದಲ್ಲೂ ಸೋಂಕಿತರ ಮೇವೆ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಚಿಕಿತ್ಸಾ ವಿಧಾನವನ್ನು ಪ್ರಯೋಗಿಸಲಾಗುತ್ತಿದೆ. ಅಮೆರಿಕಾದಲ್ಲೂ 11 ಜನರಿಗೆ ಈ ರೀತಿಯ ಚಿಕಿತ್ಸೆ ನೀಡಿದ್ದು ಸೋಂಕಿತರ ದೇಹದಲ್ಲಿ ಆಮ್ಲಜನಕ ಪ್ರಮಾಣ ವೃದ್ಧಿಸಿರುವುದು ಕಂಡು ಬಂದಿದೆ.

ಬೆಂಗಳೂರು ಲ್ಯಾಬ್ ಗೆ ಅನುಮತಿ ನೀಡಿರುವ ಬಗ್ಗೆ ಟ್ವೀಟ್

ರಾಜ್ಯದಲ್ಲಿ ಇರುವ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಹೆಚ್ಚು ಸಹಕಾರಿಯಾಗುವ ನಿರೀಕ್ಷೆಯಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ವಿಧಾನ ಹೇಗಿರುತ್ತದ?

ಕೊರೊನಾ ವೈರಸ್ ಸೋಂಕಿಗೆ ಸಿಲುಕಿ ಚಿಕಿತ್ಸೆ ಪಡೆದು ಗುಣಮುಖರಾದ ವ್ಯಕ್ತಿಗಳ ರಕ್ತವನ್ನು ಸಂಗ್ರಹಿಸಲಾಗುತ್ತದೆ. ಈ ರಕ್ತವನ್ನು ಗಂಭೀರ ಸ್ಥಿತಿಯಲ್ಲಿ ಇರುವ ಕೊರೊನಾ ವೈರಸ್ ಸೋಂಕಿತರಿಗೆ ನೀಡಲಾಗುತ್ತದೆ. ಈ ಚಿಕಿತ್ಸಾ ವಿಧಾನವನ್ನು ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಎಂದು ವೈದ್ಯಕೀಯ ಭಾಷೆಯಲ್ಲಿ ಹೇಳಲಾಗುತ್ತದೆ.

ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿಯ ಎಫೆಕ್ಟ್ ಹೇಗಿರುತ್ತೆ?

ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳಲ್ಲಿ ವೈರಸ್ ಗಳ ವಿರುದ್ಧ ಹೋರಾಡುವ ಶಕ್ತಿ ಇರುತ್ತದೆ. ಅಂಥ ವ್ಯಕ್ತಿಗಳ ರಕ್ತವನ್ನು ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ನೀಡುವುದರಿಂದ ಅವರಲ್ಲೂ ವೈರಸ್ ಗಳ ವಿರುದ್ಧ ಹೋರಾಡಬಲ್ಲ ಶಕ್ತಿ ವೃದ್ಧಿಸುತ್ತದೆ. ಒಮ್ಮೆ ಸೋಂಕಿನಿಂದ ಗುಣಮುಖನಾದ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ಆತನ ರಕ್ತವನ್ನು ಸೋಂಕಿತನಿಗೆ ನೀಡುವುದರಿಂದ ರೋಗಿಯಲ್ಲೂ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವ ಸಾಧ್ಯತೆಯಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಪರಿಣಾಮಕಾರಿಯಾಗಿದೆಯೇ?

ಕೊರೊನಾ ವೈರಸ್ ಸೋಂಕಿತರ ಮೇಲೆ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಪರಿಣಾಮಕಾರಿಯಾಗಿ ಪ್ರಭಾವ ಬೀರಲಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಈ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಚಿಕಿತ್ಸಾ ವಿಧಾನಕ್ಕೆ ಅಮೆರಿಕಾದ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಕೂಡಾ ಅನುಮೋದನೆ ನೀಡಿಲ್ಲ. ಏಕೆಂದರೆ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಕೊರೊನಾ ವೈರಸ್ ನಿವಾರಣೆಗೆ ಸಹಕಾರಿ ಆಗುತ್ತದೆಯೇ ಇಲ್ಲವೇ ಎಂಬುದರ ಬಗ್ಗೆ ವೈದ್ಯರು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ.